ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಕಾಲ್ಚಿಕಮ್

ಏಕದಳ ಸಸ್ಯಗಳ ಗುಂಪಿನ ಲಿಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಜಾತಿಯ ಮೂಲಿಕೆ ಸಸ್ಯ. ಮೆಡೊ ಸ್ಯಾಫ್ರನ್, ಆಟಮ್‍ಕ್ರೊಕಸ್ ಮುಂತಾದ ಬಳಕೆಯ ಇಂಗ್ಲಿಷ್ ಹೆಸರುಗಳಿವೆ. ಸಂಸ್ಕ್ರತದಲ್ಲಿ ಹಿರಣ್ಯತುತ್ಥ ಎಂದೂ ಕನ್ನಡದಲ್ಲಿ ಕಣ್ಣುಕಾಡಿಗೆ ಗಿಡ ಎಂದೂ ಕರೆಯುತ್ತಾರೆ. ಈ ಜಾತಿಯಲ್ಲಿ ಸುಮಾರು 85 ಪ್ರಭೇಧಗಳಿವೆ. ಇದರಲ್ಲಿ ಬಹುಪಾಲು ಪ್ರಭೇಧಗಳು ಯೂರೋಪ್, ಪಶ್ಚಿಮ ಏಷ್ಯ ಮತ್ತು ಉತ್ತರ ಆಫ್ರಿಕಗಳಲ್ಲಿ ಬೆಳೆಯುತ್ತವೆ. ಈಪ್ರಭೇಧಗಳಲ್ಲಿ ಮುಖ್ಯವಾದವು ಕಾಲ್ಚಿಕಮ್ ಆಟಮ್ನೇಲ್ ಮತ್ತು ಕಾ. ಲ್ಯೂಟಿಯಮ್. ಲ್ಯೂಟಿಯಮ್ ಪ್ರಭೇಧ ಪಶ್ಚಿಮ ಹಿಮಾಲಯದ 2,000'9000' ಎತ್ತರದ ಪ್ರದೇಶಗಳಲ್ಲಿ ಕಾಡಿನ ಅಂಚುಗಳಲ್ಲೊ ಹುಲ್ಲುಗಾವಲುಗಳಲ್ಲೊ ಸ್ವಾಭಾವಿಕವಾಗಿ ಬೆಳೆಯುತ್ತದೆ. ಔಷಧ ಪ್ರಾಮುಖ್ಯ ಇರುವ ಜೀವಕೋಶಶಾಸ್ತ್ರ ಮತ್ತು ತಳಿಶಾಸ್ತ್ರದ ಕೆಲವು ಪ್ರಯೋಗಗಳಲ್ಲಿ ಬಳಸಲಾಗುವ ಕಾಲ್ಚಿಸೀನ್ ಎಂಬ ವಸ್ತುವನ್ನು ಇದರಿಂದ ಪಡೆಯಬಹುದಾದ್ದರಿಂದ ಈ ಗಿಡವನ್ನು ಬೆಳೆಸುವುದು ಉಂಟು.

 ಕಾಲ್ಚಿಕಮ್ ಗಿಡ ಬಲು ಚಿಕ್ಕದು. ಇದರ ಕಾಂಡ ಭೂಮಿಯಲ್ಲೇ ಹುದುಗಿಕೊಂಡಿರುವ ಗುಂಡಿಗಿನ ಗೆಡ್ಡೆಯಂತಿದೆ(ಕಾರಮ್). ಎಲೆಗಳು ಹುಲ್ಲಿನ ಎಸಳು ಮೇಲೆ ಜೋಡಣೆಯಾಗಿರಬಹುದು. ಅಲ್ಲದೆ ಇವು ಬಹಳ ಸ್ವಲ್ಪ ಕಾಲ ಮಾತ್ರ ಇರುತ್ತವೆ. ಮಾರ್ಚ್ ತಿಂಗಳಲ್ಲಿ ಹುಟ್ಟಿ ಜೂನ್ ಹೊತ್ತಿಗೆ ಬಿದ್ದು ಹೋಗುತ್ತವೆ, ವಸಂತಋತುವಿನಲ್ಲಿ ಭೂಗತ ಗೆಡ್ಡೆಯಿಂದ ಹೂಗೊಂಚಲು ಹೊರಕ್ಕೆ ಬರುತ್ತದೆ. ಹೂವಿನ ಪೆರಿಯಾಂತ್ ಭಾಗ ಬಹಳ ಉದ್ದವಾಗಿದ್ದು ನೆಲದ ಮೇಲೆ ಕಾಣಿಸುತ್ತದೆ. ಅಂಡಾಶಯವನ್ನೊಳಗೊಂಡ ಭಾಗ ಮಾತ್ರ ನೆಲದೊಳಗೇ ಹುದುಗಿರುತ್ತದೆ. ಪೆರಿಯಾಂತ್ 6 ಹಾಲೆಗಳುಳ್ಳದ್ದು, ಕೇಸರಿಗಳು 6, ಅಂಡಾಶಯದಲ್ಲಿ ಉಚ್ಚಸ್ಥಾನದ 3 ಕೋಣೆಗಳಿವೆ; ಒಳಗೆ ಹಲವಾರು ಅಂಡಕಗಳಿವೆ. ಫಲ ಸಂಪುಟಮಾದರಿಯದು. ಪರಾಗಸ್ಪರ್ಶ ಕ್ರಿಯೆ ಜೀನು ನೊಣಗಳು ಸಹಕಾರದಿಂದ ನಡೆಯುತ್ತದೆ. ಅನಂತರ ಹೂವಿನ ತೊಟ್ಟು ಉದ್ದ ಬೆಳೆಯುವುದರಿಂದ ಕಾಯಿ ನೆಲದ ಮೇಲಕ್ಕೆ ಬರುತ್ತದೆ.

ಕಾಲ್ಚಿಕಮ್ ಸಸ್ಯವನ್ನು ಬೀಜಗಳ ಮುಖಾಂತರ ವೃದ್ಥಿಸುತ್ತಾರೆ. ಸಾಮಾನ್ಯವಾಗಿ ಮೇ ತಿಂಗಳ ಅನಂತರ ಪಾತಿಗಳಲ್ಲೊ ಪೆಟ್ಟಿಗೆಗಳಲ್ಲೊ ಬೀಜ ಬಿತ್ತಿ ಮೇಲೆಲ್ಲ ತೆಳುವಾಗಿ ಮಣ್ಣು ಮುಚ್ಚುತ್ತಾರೆ. ನೆರಳಿದ್ದರೆ ಮೊಳೆಯಲು ಅನುಕೂಲ. ಬೀಜ ಮೊಳೆಯಲು ಬಹಳ ಕಾಲ ಬೇಕು. ಒಂದು ವರ್ಷದವಾದ ಮೇಲೆ ಸಸಿಗಳನ್ನು ಬೇರೆಡಗೆ ಸಾಗಿಸಿ ಒಂದು ಗಿಡದಿಂದ ಇನ್ನೊಂದಕ್ಕೆ 3' ಅಂತರವಿರುವಂತೆ ನಾಟಿ ಮಾಡುತ್ತಾರೆ. ಗಿಡಗಳು ಎರಡು ವರ್ಷದವಾದ ಮೇಲೆ ಗೆಡ್ಡೆಗಳ ಸಂಗ್ರಹಣೆ ಆರಂಭವಾಗುತ್ತದೆ. ಸಂಗ್ರಹಣೆಯ ಕಾಲ ಸಾಮಾನ್ಯವಾಗಿ ಜೂನ್-ಜುಲೈ ತಿಂಗಳುಗಳು. ಗೆಡ್ಡೆಗಳು ಕಂದು ಅಥವಾ ಕಂದುಮಿಶ್ರಿತ ಬೂದು ಬಣ್ಣದವು. ಅವುಗಳ ಆಕಾರ ಶಂಕುವಿನಂತೆ ಇಲ್ಲವೆ ಅಂಡದಂತೆ; ಉದ್ದ 15-35 ಮಿಮೀ., ದಪ್ಪ 10-20 ಮಿಮೀ. ಗೆಡ್ಡೆಯ ಮೇಲೆಲ್ಲ ಅಸ್ಪಷ್ಟವಾದ ಇದರ ಒಳಭಾಗ ಬೆಳ್ಳಗಿದ್ದು ಪಿಷ್ಟದಿಂದ ಕೂಡಿದೆ. ಇದಕ್ಕೆ ವಾಸನೆಯಿಲ್ಲ: ಕಟುವಾದ ಹಾಗು ಕಹಿ ರುಚಿಯಿದೆ. ಗೆಡ್ಡೆಗಳನ್ನು ನೆಲದಿಂದ ತೆಗೆದ ಅನಂತರ ಮೇಲಿನ ಹುರುಪೆಯಂಥ ಭಾಗವನ್ನು ಹೆರೆದು ತೆಗೆದು ಅಡ್ಡಡ್ಡವಾಗಿ ಕತ್ತರಿಸಿ 650 ಸೆಂ.ಗೆ ಮೀರದ ಉಷ್ಣತೆಯಲ್ಲಿ ಒಣಗಿಸುತ್ತಾರೆ.

ಬಹಳ ಹಿಂದಿನಿಂದಲೂ ಔಷಧಪ್ರಾಮುಖ್ಯವಿರುವ ಇದರ ಗೆಡ್ಡೆಯನ್ನು ಜೀರ್ಣಕಾರಿ, ಸುಖವಿರೇಚಕ ಹಾಗೂ ದೇಹದ ಪೋಷಣವ್ಯಾಪಾರಗಳನ್ನು ಬದಲಾಯಿಸಿ ಅವನ್ನು ಆರೋಗ್ಯಸ್ಥಿತಿಗೆ ತರುವಂಥ ಔಷಧಿಯಾಗಿ ಬಳಸುತ್ತಿದ್ದಾರೆ. ಸಂಧಿವಾತದಲ್ಲೂ ಯಕೃತ್ ಮತ್ತು ಗಲ್ಮಗಳ ಖಾಯಿಲೆಗಳಲ್ಲೂ ಇದರ ಉಪಯೋಗ ಇದೆ. ಗೆಡ್ಡೆಯ ಪುಡಿಯನ್ನು ಕೇಸರಿ ಮತ್ತು ಮೊಟ್ಟೆಯ ಲೋಳೆಯೊಂದಿಗೆ ಸೇರಿಸಿ ಸಂಧಿವಾತದ ಬಾವುಗಳಿಗೆ ಹಚ್ಚುವುದುಂಟು. ಶುಂಠಿ ಮತ್ತು ಮೆಣಸುಗಳೊಂದಿಗೆ ಮಿಶ್ರಮಾಡಿ ಸೇವಿಸಿದರೆ ವಾಜೀಕರವೆಂದು ಹೇಳಿಕೆ. ಮೈಲುತುತ್ತದೊಂದಿಗೆ ಸೇರಿಸಿ ಅಂಜನ ಮಾಡುವುದೂ ಉಂಟು ಇದಕ್ಕೆ ತುತ್ತಂಜನ ಎಂದು ಹೆಸರಿದೆ. ಬೀಜಗಳಿಗೂ ಗೆಡ್ಡೆಯ ಔಷಧೀಯ ಗುಣಗಳೇ ಇವೆ.

ಗೆಡ್ಡೆಯಲ್ಲಿ ಕಾಲ್ಚಿಸೀನ್ ಎಂಬ ಸಸ್ಯಕ್ಷಾರವಿದೆ (ಆಲ್ಕಲಾಯಿಡ್). ಇದನ್ನು ಗೆಡ್ಡೆಯಿಂದ ಬೇರ್ಪಡಿಸಿದಾಗ ಹಳದಿ ಬಣ್ಣದ ತೆಳುಹಲ್ಲೆ, ಹರಳು ಇಲ್ಲವೆ ಪುಡಿಯ ರೂಪ ತಾಳುತ್ತದೆ. ಇದಕ್ಕೆ ಅತಿ ಕಹಿ ರುಚಿಯಿದೆ. ನೀರಿನೊಂದಿಗೆ ಸೇರಿಸಿ ಕೊಂಚ ಬಿಸಿ ಮಾಡಿದಾಗ ಒಣಹುಲ್ಲಿನ ವಾಸನೆ ಬರುತ್ತದೆ. ಬಹಳ ವಿಷಪೂರಿತವಾದ ಈ ವಸ್ತುವನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೂ ತೀಕ್ಷ್ಣವಾದ ವಾಂತಿ, ಭೇದಿ, ಕರುಳುಬೇನೆ ಉಂಟಾಗುತ್ತವೆ. ಚರ್ಮದ ಮೇಲೆ ಲೇಪಿಸಿದರೆ ರಕ್ತ ಸಂಚಯವಾಗಿ ನೋವುಂಟಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಕರುಳಿನಲ್ಲಿ ರಕ್ತಸ್ರಾವವಾಗಿ ಸಾವು ಸಂಭವಿಸುವುರುಂಟು. ಆದರೂ ಇದನ್ನು ಕೀಲುವಾತ ರೋಗದಲ್ಲಿ (ಗೌಟ್) ಲಘಪ್ರಮಾಣದಲ್ಲಿ ಔಷಧಿಯಾಗೆ ಬಳಸುತ್ತಾರೆ. ಕೀಲುವಾತದ ಕೆಲವು ಚಿಹ್ನೆಗಳಾದ ಇಸಬು, ಶ್ವಾಸನಾಳಗಳ ಒಳಚರ್ಮದ ಊತ, ನರಗಳ ಉರಿಯೂತ ಮುಂತಾದುವನ್ನಿದು ಗುಣಪಡಿಸುತ್ತದೆ.

ಈಚೆಗೆ ಕಾಲ್ಚಿಸೀನ್ ತನ್ನ ಒಂದು ವಿಶಿಷ್ಟ ಗುಣದಿಂದಾಗಿ ಬಹಳ ಪ್ರಸಿದ್ಥಗೆ ಬಂದಿದೆ. ಪ್ರಾಣಿ ಹಾಗು ಸಸ್ಯಗಳ ಜೀವಕೋಶವಿಭಜನೆಯಲ್ಲಿ ಕದಿರು ಸಾಧನ (ಸ್ಪಿಂಡಲ್ ಆಪರೇಟಸ್) ರೂಪುಗೊಳ್ಳುವುದನ್ನು ತಡೆಯುವುದರ ಮುಖಾಂತರ ವಿಭಜನೆಯನ್ನು ಅಡ್ಡಿಪಡಿಸುವುದೇ ಇದರ ವಿಶೇಷ ಗುಣ. ಇದರಿಂದಾಗಿ ಜೀವಕೋಶಗಳಲ್ಲಿನ ಕ್ರೋಮೋಸೋಮುಗಳು ದ್ವಿಗುಣಿತವಾತ್ತವೆ. ಇಂಥ ದ್ವಿಗುಣಿತ ಕ್ರೋಮೋಸೋಮುಗಳನ್ನುಳ್ಳ ಸಸ್ಯಗಳು ಸಹಜಸ್ಥಿತಿಯ ಉತ್ತಮಮಟ್ಟದ ಸಸ್ಯಗಳೆನಿಸಿಕೊಳ್ಳುತ್ತವೆ. ಇವನ್ನು ಬಹುಗುಣಿತ (ಪಾಲಿಪ್ಲಾಯ್ಡ್) ಸಸ್ಯಗಳೆನ್ನುತ್ತಾರೆ. ಕಾಲ್ಚಿಸೀನಿಗೆ ಈ ಶಕ್ತಿಯಿರುವುದರಿಂದ ಸಸ್ಯ ತಳಿಗಳನ್ನು ಈ ವಿಧಾನದ ಮೂಲಕ ಉತ್ತಮಪಡಿಸುವುದಕ್ಕೆಂದು ಬಳಸುತಾರೆ. ಕೆಲವು ಬಾರಿ ಅಡ್ಡತಳಿಯೆಬ್ಬಿಕೆ ಪ್ರಯೋಗಗಳಲ್ಲಿ ಬಂಜೆ ತಳಿಗಳು ಹುಟ್ಟಿದಾಗ ಅವುಗಳ ಕ್ರೋಮೋಸೋಮುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದರ ಮೂಲಕ ಅವನ್ನು ಫಲದಂತೆ ಮಾಡುವುದಕ್ಕೂ ಇದನ್ನು ಬಳಸುತ್ತಾರೆ.

(ಬಿ.ಪಿ.)

 

 